Monday 17 February 2014

ಶುರುವಾದದ್ದು ಹೀಗೆ

ಶುರುವಾದದ್ದು ಹೀಗೆ

೨೦೦೦ ದ ಇಸವಿ. ಮದುವೆಯಾಗಿ ವಿದೇಶದಲ್ಲಿ ಸಂಸಾರ ಸಾಗುತ್ತಿತ್ತು. ಇನ್ನೂ ಮಕ್ಕಳಿರಲಿಲ್ಲ. ಮುಂದೊಂದು ದಿನ ಪುನಃ ಸ್ವದೇಶಕ್ಕೆ ಮರಳಲೇ ಬೇಕು ಎಂಬ ಹೆಬ್ಬಯಕೆ ನಮ್ಮಿಬ್ಬರಿಗೂ ಇತ್ತು. ನಮ್ಮೂರಿನ ಹಳ್ಳಿಯಲ್ಲಿ ತೋಟ, ಮನೆ ಇದ್ದರೂ, ಕೆಲಸದ ನಿಮಿತ್ತ ಬೆಂಗಳೂರಲ್ಲಿ ಇರಲೇಬೇಕು . ಹಾಗಾಗಿ ಅಲ್ಲಿ ಒಂದು ನೆಲೆ ಇದ್ದರೆ  ಚೆನ್ನಲ್ಲವೇ?! ಎಂದೆನ್ನಿಸಿ ಸೂಕ್ತ site ಹುಡುಕಲು ಹೊರಟೆವು .

ಈಗತಾನೇ ಅಮೆರಿಕದಿಂದ ಬಂದಿದ್ದ ಮೈದುನ , ಇವರ ಅಕ್ಕ-ಭಾವರ ಮಾರ್ಗದರ್ಶನದಲ್ಲಿ ಉತ್ತಮ layout ಒಂದರಲ್ಲಿ ಜಾಗ ಖರೀದಿಸುವುದೆಂದು ನಿರ್ಧರಿಸಿದೆವು.

ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದ ದಿನಗಳು ಇನ್ನೂ ನೆನಪಿದೆ. ದುಬಾರಿ ದೇಶದಲ್ಲಿ  ಬಾಡಿಗೆ ಉಳಿಸುವುದಕ್ಕಾಗಿ sharing ವ್ಯವಸ್ಥೆ ರೂಢಿಯಲ್ಲಿತ್ತು . ಅದು ನಮ್ಮ ಜೀವನದ ವಿಟಮಿನ್ M  ಸಮತೊಲನಕ್ಕೂ ಅನುಕೂಲವಾಯ್ತು. ನಮ್ಮವರ ಸ್ನೇಹಿತನೇ ಮನೆವಾಸಿಯೂ ಆಗಿದ್ದು, ನಾವೆಲ್ಲರೂ ಕೆಲಸ ಕಾರ್ಯಗಳನ್ನು ಹಂಚಿಕೊಂಡು, ಅಡಿಗೆ ಮಾಡಿ ಬುತ್ತಿ ಕಟ್ಟಿಕೊಂಡು ಕಛೇರಿಗೆ ಹೋಗಿ ಬರುತ್ತಿದ್ದೆವು. ನಮ್ಮಂತೆಯೇ ಬಂದ ಕನ್ನಡಿಗರ ಸ್ನೇಹ ಗಳಿಸಿಕೊಂಡು , ಹೊಸ ಊರಿನ ಹೊಸ ಜನರೊಡನೆ ಎದುರಾಗುವ ಸಮಸ್ಯೆಗಳನ್ನು ಹಂಚಿಕೊಂಡು , ಕನ್ನಡ ಸಂಘ , ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನಗಳೆಯಿತ್ತಿದ್ದೆವು .

ನಾವು ತೆಗೆದುಕೊಳ್ಳಲು ಬಯಸಿದ site ಗೆ ಹಣ ಕಟ್ಟಿ ನಮ್ಮದಾಗಿಸಿಕೊಳ್ಳುವ ಸುದ್ದಿ ಬಂದಾಗ ಒಂದೆಡೆ ಸಂಭ್ರಮ, ಇನ್ನೊಂದೆಡೆ ತಳಮಳ. ೬೦x ೪೦ site ಗೆ ಆಗಿನ ಬೆಲೆ ಸುಮಾರು ೭ ಲಕ್ಷ ರೂಪಾಯಿಗಳು. ಜೊತೆ-ಜೊತೆಗಿನ ಬದುಕು ಈಗತಾನೇ ಶುರುಮಾಡಿದ್ದ  ನಮಗೆ ಇದೊಂದು ದೊಡ್ಡ ಮೊತ್ತ. ನಮ್ಮಲ್ಲಿದ್ದದ್ದನ್ನೆಲ್ಲ ಕೂಡಿಸಿ, ಅತೀ ಆತ್ಮೀಯರ ಬಳಿ ಸ್ವಲ್ಪ ಸಾಲ ಕೇಳಿ ಊರಿಗೆ ಕಳುಹಿಸಿದೆವು.

ಕೆಲವೇ ದಿನಗಳಲ್ಲಿ ಬಂದ ೪ ದಿನದ ರಜೆಯನ್ನು ಎಲ್ಲಿಗೂ  ಹೋಗದೆ ಮನೆಯಲ್ಲಿಯೇ ಕುಳಿತು ಕಳೆದೆವು - ನಮಗೆ ಸಾಲ ತೀರಿಸದೆ ಪ್ರವಾಸ ಎಂದು ತಿರುಗಾಡುವುದು ಸರಿ ಎನ್ನಿಸಲಿಲ್ಲ.

ಇದೆಲ್ಲ ಆಗಿ ಈಗ ೧೪ ವರುಷಗಳು ಕಳೆದವು. ನಾವಂದುಕೊಂಡಂತೆ ತಾಯ್ನಾಡಿಗೆ ಮರಳಿದ್ದೇವೆ . ಅದೇ ನಿವೇಶನದಲ್ಲಿ ಮನೆಯೂ ಆಗಿದೆ. ಅದೇ "ವಸುಂಧರಾ".

ನಮಗೆ ಜಾಗ ಕೊಡಿಸಿದ, ಹಣಕಾಸಿಗೆ ಸಹಕರಿಸಿದ, ಮನೆ ಕಟ್ಟುವಲ್ಲಿ ಬೆಂಗಾವಲಾಗಿ ನಿಂತ, ವಿದೇಶದಿಂದ ಊರಿಗೆ ಮರಳಲು ಸಹಕರಿಸಿದ ನಮ್ಮೆಲ್ಲ ಸ್ನೇಹಿತರು, ಬಾಂಧವರನ್ನು ತಂಪು ಹೊತ್ತಿನಲ್ಲಿ ನೆನೆಯುತ್ತೇವೆ .

ನಮ್ಮ ಅನುಭವಗಳ ಸಂಕಲನ ಇದು. ನೆನಪಿಗೆ ಬಂದಂತೆ ಬಂದಷ್ಟು ಉಲ್ಲೇಖಿಸುವ ಬಯಕೆ.